ಇವಾನ್ಸ್, ಸರ್ ಆರ್ಥರ್ ಜಾನ್
 	1851-1941. ಬ್ರಿಟಿಷ್ ಪ್ರಾಕ್ತನಶಾಸ್ತ್ರಜ್ಞ. ಕಾಗದ ತಯಾರಿಕೆ ಸಂಸ್ಥೆಯಾದ ಜಾನ್ ಡಿಕೆನ್ಸನ್ ಮತ್ತು ಕಂಪನಿಯ ಸರ್ ಜಾನ್ ಇವಾನ್ಸ್ ಎಂಬುವನ ಹಿರಿಯ ಮಗ. ಹ್ಯಾರೋ ಮತ್ತು ಬ್ರೇಸ್ ನೋಸ್‍ಗಳಲ್ಲಿ ವ್ಯಾಸಂಗಮಾಡಿದ. ಪ್ರಾಕ್ತನಶಾಸ್ತ್ರದಲ್ಲಿ ಇವಾನ್ಸನ ತಂದೆ ಭೂ ವಿe್ಞÁನಿಯೆಂದೂ ಪ್ರಾಚೀನಾನ್ವೇಷಕನೆಂದೂ ಪ್ರಖ್ಯಾತನಾಗಿದ್ದ. ಆದ್ದರಿಂದಲೇ ಮಗನಿಗೆ ಪ್ರಾಕ್ತನ ಶಾಸ್ತ್ರದಲ್ಲಿ ಆಸಕ್ತಿ ಬೆಳೆಯಿತು. 1871ರಿಂದ 1878ರ ವರೆಗೆ ಇವಾನ್ಸ್ ರಗುಸ ಎಂಬಲ್ಲಿ ಮ್ಯಾಂಚೆಸ್ಟರ್ ಗಾರ್ಡಿಯನ್ ಪತ್ರಿಕಾಪ್ರತಿನಿಧಿಯಾಗಿ, ಬಾಲ್ಕನ್ ಪ್ರದೇಶದಲ್ಲಿ ವಿಶೇಷವಾಗಿ ಸಂಚರಿಸಿ, ಡಾಲ್ಮೇಷಿಯನ್ ಇತಿಹಾಸವನ್ನೂ ಪ್ರಾಕ್ತನವನ್ನೂ ಅಭ್ಯಾಸ ಮಾಡಿದ.

	ಇವಾನ್ಸ್ 1878ರಲ್ಲಿ ಇ.ಎ. ಫ್ರೀಮನ್ ಎಂಬ ಇತಿಹಾಸ ಶಾಸ್ತ್ರಜ್ಞನ ಮಗಳಾದ ಮಾರ್ಗರೆಟ್ ಎಂಬುವಳನ್ನು ಮದುವೆಯಾದ. ರಗುಸ ಎಂಬಲ್ಲೆ ಈತ 1882ರವರೆಗೂ ಇದ್ದ. ಆ ಪ್ರದೇಶದ ಬಂಡಾಯವೊಂದರಲ್ಲಿ ಈತನ ಮೇಲೂ ಸಂಶಯ ಹುಟ್ಟಿತು. ಆಸ್ಟ್ರಿಯನ್ ಸರ್ಕಾರ ಈತನ್ನು ಹೊರಹಾಕಲಾಗಿ ಸ್ವದೇಶಕ್ಕೆ ಹಿಂದಿರುಗಿದ. 1884ರಿಂದ 1909ರವರೆಗೆ ಆಕ್ಸ್‍ಫರ್ಡಿನ ಅಷ್ಮೋಲಿಯನ್ ವಸ್ತು ಸಂಗ್ರಹಾಲಯದ (ಮ್ಯೂಸಿಯಂ) ಅಭಿರಕ್ಷಕ (ಕ್ಯೂರೇಟರ್) ಆಗಿದ್ದ. ಈ ಸಂಗ್ರಹಾಲಯದ ಜೀರ್ಣೋದ್ಧಾರ ಹಾಗೂ ವಿಸ್ತರಣೆಗೆ ಇವಾನ್ಸನೇ ಬಹುಮಟ್ಟಿಗೆ ಕಾರಣ. ರತ್ನಗಳನ್ನೂ ನಾಣ್ಯಗಳನ್ನೂ ಅಭ್ಯಾಸ ಮಾಡುವುದೆಂದರೆ ಈತನಿಗೆ ತುಂಬ ಇಷ್ಟ. ಆದಿಮ ಲಿಪಿಯಲ್ಲಿ ಇವಾನ್ಸ್ ತಳೆದ ಆಸಕ್ತಿಯ ಫಲವೇ ನಾಸಸ್‍ನಲ್ಲಿ ನಡೆದ ಭೂಶೋಧನೆ. 1899 ರಲ್ಲಿ ಕ್ರೀಟನ್ ಪರಿಶೋಧನ ನಿಧಿಯಿಂದ ದೊರೆತ ಸಹಾಯದಿಂದ ಆರಂಭಿಸಿ, ಮುಂದೆ ಅನ್ಯರ ನೆರವನ್ನಪೇಕ್ಷಿಸದೆ ಸ್ವಪ್ರಯತ್ನದಿಂದಲೇ ಈ ಕಾರ್ಯದಲ್ಲಿ ಮುಂದುವರಿದ ಇವಾನ್ಸ್ ಐರೋಪ್ಯ ನಾಗರಿಕತೆಗೆ ಮೂಲವೆನ್ನಬಹುದಾದ ಕ್ರೀಟ್ ನಾಗರಿಕತೆಯನ್ನು ಬೆಳಕಿಗೆ ತಂದ. ಇದು ಈತನ ಜೀವನದ ದೊಡ್ಡ ಸಾಧನೆ. 1911ರಲ್ಲಿ ಇವಾನ್ಸನಿಗೆ ಬ್ರಿಟಿಷ್ ದೊರೆಯಿಂದ ನೈಟ್ ಬಿರುದು ಲಭ್ಯವಾಯಿತು.

	ಕ್ರೀಟನ್ ಪಿಕ್ಟೊಗ್ರಾಫ್ಸ್ ಮತ್ತು ಫೋನೀಷಿಯನ್ ಸ್ಕ್ರಿಪ್ಟ್ಸ್, ವ್ಯಾಲೇಸ್ ಆಫ್ ಮಿನೊಸ್ ಮತ್ತು ರಿಪೋರ್ಟ್ ಆನ್ ಎಕ್ಸ್‍ಕವೇಷನ್ಸ್ ಅಟ್ ನಾಸಸ್-ಇವು ಇವಾನ್ಸ್ ಬರೆದಿರುವ ಪುಸ್ತಕಗಳಲ್ಲಿ ಮುಖ್ಯವಾದುವು.
(ಎ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ